ವಿನೋಬಾ ಭಾವೆ
 	1895-1982. ಭೂದಾನ ಚಳವಳಿಯ ಆದ್ಯ ಪ್ರವರ್ತಕ. ನಿಷ್ಠಗಾಂಧೀವಾದಿ. ಗಾಂಧಿಯೋತ್ತರ ಭಾರತದಲ್ಲಿ ಸರ್ವೋದಯ ಚಳವಳಿಗೆ ಹೊಸ ಆಯಾಮವನ್ನಿತ್ತವರು. ಗಾಂಧೀಜಿಯವರ ಅಸಂಖ್ಯಾತ ಅನುಯಾಯಿಗಳಲ್ಲಿ ಸಂತ ಎನಿಸಿಕೊಂಡವರು ಇವರೊಬ್ಬರೇ. ಇವರ ಪೂರ್ಣ ಹೆಸರು ವಿನಾಯಕ ನರಹರಿ ಭಾವೆ. ಮಹಾರಾಷ್ಟ್ರದ ಕೊಲಾಬ ಜಿಲ್ಲೆಯ ಗಗೋಡೆ ಗ್ರಾಮದಲ್ಲಿ 1895 ಸೆಪ್ಟೆಂಬರ್ 11ರಂದು ಜನಿಸಿದರು. ತಂದೆ ನರಹರಿ ಶಂಭುರಾವ್ ಭಾವೆ; ತಾಯಿ ರುಕ್ಮಿಣೀದೇವಿ. ತಂದೆ ಆಗಿನ ಬರೋಡ ರಾಜ್ಯದಲ್ಲಿ ಜವಳಿ ಉದ್ಯಮ ಸಂಸ್ಥೆಯಲ್ಲಿ ತಂತ್ರಜ್ಞರಾಗಿದ್ದರು. ತಾಯಿ, ದೈವದಲ್ಲಿ ಅಪಾರ ಶ್ರದ್ಧೆಯಿರಿಸಿಕೊಂಡಿದ್ದ ಸಾತ್ವಿಕ ಮಹಿಳೆ. 
	ಇವರು ಗಾಂಧೀಜಿಯವರನ್ನು ಮೊದಲು 1916 ಜೂನ್ 7ರಂದು ಅಹಮದಾಬಾದಿಗೆ ಹತ್ತಿರವಿದ್ದ ಕೊಚರಬ್ ಸತ್ಯಾಗ್ರಹ ಆಶ್ರಮದಲ್ಲಿ ಭೇಟಿಯಾದರು. ಅನಂತರ ಗಾಂಧೀಜಿಯವರ ಅಪ್ಪಣೆ ಪಡೆದು ಸತ್ಯಾಗ್ರಹ ಆಶ್ರಮವಾಸಿಯಾದರು. ರಾಷ್ಟ್ರಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡರು.
	ಇವರು ಚಿಕ್ಕವಯಸ್ಸಿನಲ್ಲಿಯೇ ಆಧ್ಯಾತ್ಮಿಕ ಶಕ್ತಿಗಳಿಸಿದ್ದರು. ಸಬರಮತಿ ಆಶ್ರಮದಲ್ಲಿನ ಇವರ ಬದುಕು ಮಹಾನ್ ಕರ್ಮಯೋಗಿಯ ಬದುಕೇ ಆಗಿತ್ತು. ಇವರ ಓದು, ಬರೆಹ, ದೈಹಿಕ ಪರಿಶ್ರಮಗಳ ಕೆಲಸಗಳನ್ನು ನೋಡಿ ಆಶ್ರಮವಾಸಿಗಳು ಬೆಕ್ಕಸಬೆರಗಾಗಿದ್ದರು. ಇವರ ಕಾಯಕನಿಷ್ಠೆ, ಆಚಾರ ವಿಚಾರಗಳು ಗಾಂಧೀಜಿಯವರಿಗೆ ಬಹಳ ಪ್ರಿಯವಾಗಿದ್ದವು. ದುರ್ಬಲ ಶರೀರದವರಾದರೂ ದಿನಕ್ಕೆ ಎಂಟುಗಂಟೆ ಚರಕದಲ್ಲಿ ನೂಲುತ್ತಿ ದ್ದರು. ಚರಕಗಳು ಆಗ ಹೆಚ್ಚು ಸುಧಾರಣೆಗೊಂಡಿರಲಿಲ್ಲ. ನೂಲುವುದು ತ್ರಾಸದಾಯಕವಾಗಿತ್ತು. ಶ್ರಮವಹಿಸಿ ಕೆಲಸ ಮಾಡುವ ಸಂಕಲ್ಪಶಕ್ತಿ-ಇಚ್ಛಾಶಕ್ತಿಗಳು ಇವರಿಗಿದ್ದುವು.
	ಇವರು ಅಧ್ಯಯನಶೀಲರೂ ಆಗಿದ್ದರು. ಅರ್ಥಶಾಸ್ತ್ರ, ಗಣಿತ, ಖಗೋಳವಿಜ್ಞಾನ, ಭೂಗೋಳಶಾಸ್ತ್ರ, ಭಾಷಾವಿಜ್ಞಾನದಂತಹ ವಿಷಯಗಳಲ್ಲಿ ಆಳವಾದ ಜ್ಞಾನ ಹೊಂದಿದ್ದರು. ಶಬ್ದಕೋಶದ ಆಸಕ್ತಿಯಿಂದಾಗಿ ಕೋಶಾನಂದರೇ ಆಗಿದ್ದರು.
	ಇವರು ಗಾಂಧೀ ವಿಚಾರ ಗಳನ್ನು ಪ್ರಚಾರಮಾಡಿದರು. ಕೇರಳದ ವೈಕೋಮ್ ದೇವಾಲಯಕ್ಕೆ ಹರಿಜನರ ಪ್ರವೇಶದ ಜವಾಬ್ದಾರಿಯನ್ನು ಗಾಂಧೀಜಿ ಇವರಿಗೆ ವಹಿಸಿ ದ್ದರು(1924). ವಾರ್ಧಾದಲ್ಲಿ ಜರುಗಿದ ನಾಗರಿಕ ಅಸಹ ಕಾರ ಚಳವಳಿಯಲ್ಲಿ ಭಾಗವ ಹಿಸಿದರು(1930). ಗಾಂಧೀಜಿ ವೈಯಕ್ತಿಕ ಸತ್ಯಾಗ್ರಹ ಸಂದರ್ಭದಲ್ಲಿ ಇವರನ್ನು ಪ್ರಥಮ ಸತ್ಯಾಗ್ರಹಿಯನ್ನಾಗಿ ಮಾಡಿ ನೆಹರೂ ಅವರನ್ನು ಎರಡನೆಯ ಸತ್ಯಾಗ್ರಹಿಯನ್ನಾಗಿ ಮಾಡಿದ್ದು ಆಗ ಗಮನಾರ್ಹ ಸುದ್ದಿಯಾಯಿತು. ಗಾಂಧೀಜಿಯವರ ಹತ್ಯೆಯ ಅನಂತರ ರಚನಾತ್ಮಕ ಕಾರ್ಯಕರ್ತರ ದೃಷ್ಟಿ ಇವರೆಡೆಗೆ ಹೊರಳಿತು (1948). ದೇಶದ ವಿವಿಧ ಕಡೆಗಳಿಂದ ಬಂದ ಕಾರ್ಯಕರ್ತರು ಸೇವಾಗ್ರಾಮದಲ್ಲಿ ಸಭೆ ಸೇರಿ, ಸರ್ವೋದಯ ಸಮಾಜ, ಸರ್ವಸೇವಾ ಸಂಘಗಳ ಸ್ಥಾಪನೆ, ವರ್ಷಕ್ಕೊಮ್ಮೆ ಸರ್ವೋದಯ ಸಮ್ಮೇಳನ ನಡೆಸುವ ತೀರ್ಮಾನ ಕೈಗೊಂಡರು(1948).
	ಕೋಮು ಸೌಹಾರ್ದ ಮೂಡಿಸುವಲ್ಲಿ ಇವರು ಬಹುವಾಗಿ ಶ್ರಮಿಸಿದರು. ರಾಷ್ಟ್ರ ವಿಭಜನೆಯ ಪರಿಣಾಮವಾಗಿ, ಪಾಕಿಸ್ತಾನದಿಂದ ನಿರಾಶ್ರಿತರ ಪುನರ್ವಸತಿಯಂತಹ ಗುರುತರ ಕಾರ್ಯದಲ್ಲಿ ಪ್ರಧಾನಮಂತ್ರಿ ನೆಹರೂ ಅವರಿಗೆ ಬಹುವಾಗಿ ನೆರವಾದರು. ವಿವಿಧೆಡೆ ಶಾಂತಿಯಾತ್ರೆ ಕೈಗೊಂಡರು. ವೈಯಕ್ತಿಕ ಸತ್ಯಾಗ್ರಹ, ಕ್ವಿಟ್ ಇಂಡಿಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಇವರು ಅನೇಕ ವರ್ಷಗಳ ಜೈಲುವಾಸ ಅನುಭವಿಸಿದರು. ಜೈಲಿನಿಂದ ಬಿಡುಗಡೆಯಾದ ಅನಂತರ ಪವನಾರ್ ಆಶ್ರಮದ ಸುತ್ತುಮುತ್ತಲ ಗ್ರಾಮಗಳಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಗೊಂಡರು.
	ಇವರನ್ನು ಭೂದಾನ ಚಳವಳಿಯ ಮೂಲಕ ಗುರುತಿಸಲಾಗುತ್ತದೆ. ರಾಷ್ಟ್ರದ ಭೂ ಸಮಸ್ಯೆಯನ್ನು ಶಾಂತಯುತವಾಗಿ ಅಹಿಂಸಾಮಾರ್ಗದಿಂದ ಬಗೆಹರಿಸಲು ಈ ಚಳವಳಿ ಒಂದು ವಿನೂತನ ಮತ್ತು ಮಹತ್ತ್ವದ ಕಾರ್ಯಕ್ರಮವಾಯಿತು. ಇದು ಭಾರತ ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
	ಇವರು ಗ್ರಾಮೀಣ ಪ್ರದೇಶಗಳಲ್ಲಿ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿದ್ದಾಗ ಹೈದರಾಬಾದ್ ಬಳಿಯ ಶಿವರಾಮಪಲ್ಲಿಯಲ್ಲಿ ನಡೆಯುತ್ತಿದ್ದ ಎರಡನೆಯ ಅಖಿಲಭಾರತ ಸರ್ವೋದಯ ಸಮ್ಮೇಳನದಲ್ಲಿ 482 ಕಿಮೀ ದೂರ ಪಾದಯಾತ್ರೆ ನಡೆಸಿ ಭಾಗವಹಿಸಿದ್ದರು. ಅನಂತರ ತೆಲಂಗಾಣದ ಹಿಂಸಾಗ್ರಸ್ತ ಪ್ರದೇಶಗಳಿಗೆ ಪಾದಯಾತ್ರೆ ನಡೆಸಿದರು. 1951 ಏಪ್ರಿಲ್ 15ರಂದು ಪೋಚಮ್‍ಪಲ್ಲಿ ತಲಪಿ ಅಲ್ಲಿ 40 ಬಡ ಹರಿಜನ ಕುಟುಂಬದವರಿಗೆ 100 ಎಕರೆ ಭೂಮಿಯನ್ನು ದಾನ ಕೊಡಿಸಿದರು. ಇದು ಭೂದಾನ ಚಳವಳಿಗೆ ನಾಂದಿಯಾಯಿತು. ವಿಭಜಿತ ಪೂರ್ವಭಾರತದ ಪೂರ್ವ ಪಾಕಿಸ್ತಾನವೂ ಸೇರಿದಂತೆ ಭಾರತದ ಅನೇಕ ಭಾಗಗಳನ್ನು (13 ವರ್ಷ ಒಂದು ತಿಂಗಳು ಮೂರು ದಿನ) ಕಾಲ್ನಡಿಗೆಯಲ್ಲೇ ಸಂಚರಿಸಿ ಒಟ್ಟು 40 ಲಕ್ಷ ಎಕರೆ ಭೂಮಿಯನ್ನು ದಾನವಾಗಿ ಸಂಗ್ರಹಿಸಿದರು. ಇದನ್ನು ಗ್ರಾಮೀಣ ಭೂರಹಿತರಿಗೆ ಉತ್ಪಾದನೆಯ ಸಾಧನವನ್ನಾಗಿ ವಿತರಿಸಿದರು.
	ಇವರನ್ನು ಪ್ರಥಮ ಪಂಚವಾರ್ಷಿಕ ಯೋಜನೆ ಬಗ್ಗೆ ಚರ್ಚಿಸಲು ಪ್ರಧಾನಿ ನೆಹರೂ ದೆಹಲಿಗೆ ಆಹ್ವಾನಿಸಿದಾಗ ವಿಮಾನ ಬಳಸದೆ ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಿದರು. ಪವನಾರ್‍ನಿಂದ ದೆಹಲಿಗೆ 645 ಕಿಮೀ. ಈ ಪಾದಯಾತ್ರೆಯ ಸಂದರ್ಭದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ 7,000 ಎಕರೆ ಭೂಮಿ ದಾನ ರೂಪವಾಗಿ ದೊರೆಯಿತು.
	ಇವರು ದೆಹಲಿಯ ರಾಜಘಾಟ್‍ನ ಒಂದು ಸಣ್ಣ ಗುಡಿಸಿಲಿನಲ್ಲಿ ತಂಗಿದ್ದಾಗ ರಾಷ್ಟ್ರಪತಿ ರಾಜೇಂದ್ರಪ್ರಸಾದ್, ಪ್ರಧಾನಿ ನೆಹರೂ, ಕೇಂದ್ರ ಮಂತ್ರಿಗಳು, ಯೋಜನಾ ಆಯೋಗದವರು ಭೇಟಿಮಾಡಿ ಸಲಹೆ ಪಡೆದರು. “ಹೊಟ್ಟೆ ಹೊರೆಯಲು ಅಪೇಕ್ಷೆ ಪಡುವ ಎಲ್ಲರನ್ನೂ ಒಂದಲ್ಲಾ ಒಂದು ಕೆಲಸದಲ್ಲಿ ತೊಡಗಿಸಬೇಕು. ಆಹಾರದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದರೆ ನೇರವಾಗಿ ರಾಷ್ಟ್ರೀಯ ರಕ್ಷಣೆಯನ್ನು ಭದ್ರಗೊಳಿಸಿದಂತೆ”ಎಂಬುದು ಇವರ ವಿಚಾರವಾಗಿತ್ತು. 
	ಇವರು ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಮ್ಯಾಗ್ಸೇಸೆ ಪ್ರಶಸ್ತಿ ದೊರೆಯಿತು(1950). ಇವರಿಗೆ ಭಾರತದ ಅತ್ಯುನ್ನತ “ಭಾರತರತ್ನ” ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಯಿತು (1983). ಬಿಹಾರ ರಾಜ್ಯದಲ್ಲಿ ವೈದ್ಯನಾಥ ದೇವಾಲಯಕ್ಕೆ ಹರಿಜನರೊಂದಿಗೆ ಪ್ರವೇಶಿಸುವ ಕಾರ್ಯ, ಚಂಬಲ್ ಡಕಾಯಿತರು ನೆಲಸಿದ್ದ ಪ್ರದೇಶಗಳಲ್ಲಿ ಸಂಚಾರ ಮಾಡಿದ್ದು ಮುಂತಾದವು ಇವರ ಮಹತ್ತ್ವದ ಕಾರ್ಯಗಳಾಗಿವೆ. ಭೂದಾನ, ಗ್ರಾಮದಾನ ಚಳವಳಿಯಿಂದ ಇವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತಿಸಲಾಗಿದೆ. ಇವರ ದೃಷ್ಟಿಯಲ್ಲಿ ಭೂದಾನ, ಗ್ರಾಮದಾನ ಸಾಧನಗಳು ಮಾತ್ರ. ಅಂತಿಮ ಗುರಿ ಶೋಷಣೆರಹಿತ ಸ್ವಾವಲಂಬಿ ಗ್ರಾಮ ಸ್ವರಾಜ್ಯದ ನಿರ್ಮಾಣ. ಭಾರತ ಸರ್ವೋದಯ ಗ್ರಾಮ ಗಣರಾಜ್ಯಗಳ ಒಕ್ಕೂಟವಾಗಬೇಕು ಎಂದು ಬಯಸಿದರು. ಜೈಜಗತ್ ಎಂಬ ಘೋಷಣೆ ನೀಡಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಭಾವನೆ, ಆರ್ಥಿಕ ಮತ್ತು ರಾಜಕೀಯ ವಿಕೇಂದ್ರೀಕರಣದ ಆಧಾರ ಸ್ತಂಭಗಳ ಮೇಲೆ ಸರ್ವೋದಯ ಗಣರಾಷ್ಟ್ರಗಳ ಸಮುದಾಯಒಕ್ಕೂಟದ ಜಾಗತಿಕ ಸರ್ಕಾರ ರೂಪುಗೊಳ್ಳಬೇಕು ಎಂದು ಕರೆಯಿತ್ತರು. 
	ಇವರು ತಮ್ಮ ಕೊನೆಯ ದಿನಗಳನ್ನು ಪವನಾರ್ ಆಶ್ರಮದಲ್ಲಿ ಕಳೆದರು. ಇಂದಿರಾಗಾಂಧಿ ಸರ್ಕಾರ ಘೋಷಿಸಿದ ತುರ್ತುಪರಿಸ್ಥಿತಿಯನ್ನು ಅನುಶಾಸನ ಪರ್ವ ಎಂದು ಬಣ್ಣಿಸಿದ ಕಾರಣದಿಂದಾಗಿ ಸರ್ಕಾರಿ ಸಂತ ಎಂಬ ಟೀಕೆಗೆ ಗುರಿಯಾದರು. ಇವರು “ಸಲ್ಲೇಖನ” ವ್ರತ ಕೈಗೊಂಡು 1982 ನವೆಂಬರ್ 15ರಂದು ನಿಧನರಾದರು.	
		(ಎಮ್.ಜಿ.ಬಿ.)